ಇಂಡಿಯನ್ ಪೀನಲ್ ಕೋಡ್
ಭಾರತದಲ್ಲಿ ನ್ಯಾಯಾಲಯಗಳ ದೃಷ್ಟಿಯಿಂದ ದಂಡಾರ್ಹವಾದ ಅಪರಾಧಗಳನ್ನೂ ಈ ಅಪರಾಧಗಳಿಗೆ ವಿಧಿಸಬೇಕಾದ ಶಿಕ್ಷೆಗಳನ್ನೂ ವಿವರಿಸುವ ಕಾನೂನುಗಳ ಸಂಗ್ರಹ-ಭಾರತೀಯ ದಂಡ ಸಂಹಿತೆ. ದಂಡನೆ ಎಂಬ ಪದದ ಅರ್ಥ, ದಂಡನೆಯ ತಾತ್ತ್ವಿಕ ಹಾಗೂ ಮಾನಸಿಕ ವಿವೇಚನೆ, ದಂಡನೆಯ ಇತಿಹಾಸ ಇವುಗಳಿಗೆ ದಂಡನೆ ಎಂಬ ಶೀರ್ಷಿಕೆಯನ್ನು ನೋಡಿ.

	ಭಾರತದ 1833ರ ಚಾರ್ಟರ್ ಕಾಯಿದೆಯ ಮೇರೆಗೆ 1834ರಲ್ಲಿ ಲಾರ್ಡ್ ಮಕಾಲೆಯವರ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಮೊದಲನೆಯ ಇಂಡಿಯನ್ ಲಾ ಕಮಿಷನ್ ಎಂಬ ಆಯೋಗದವರು ಇಂಡಿಯನ್ ಪೀನಲ್ ಕೋಡಿನ ಕರಡು ಮಸೂದೆ ಸಿದ್ಧಪಡಿಸಿ, ಇದನ್ನು ಗೌರ್ನರ್ ಜನರಲ್‍ರವರಿಗೆ 1837ರ ಅಕ್ಟೋಬರ್ 14ರಂದು ಒಪ್ಪಿಸಿದರು. ಈ ಮಸೂದೆಗೆ ಸರ್ ಬ್ಯಾರನ್ಸ್ ಪೀಕಾಕ್, ಕಾಲ್‍ವಿಲ್ ಮುಂತಾದವರಿಂದ ಹಲವಾರು ಗಣನೀಯ ಮಾರ್ಪಾಡುಗಳಾದ ಅನಂತರ ಇದು 1860ರ ಅಕ್ಟೋಬರ್ 6ರಂದು ವಿಧಾನ ಮಂಡಲದಿಂದ ಅಂಗೀಕೃತವಾಯಿತು. ಇದು ಕಾಯಿದೆಯಾಗಿ 1862ರ ಜನವರಿ 1ರಿಂದ ಜಾರಿಗೆ ಬಂತು.

	ಈ ಕಾಯಿದೆ ಜಾರಿಗೆ ಬರುವ ಮುನ್ನ ಇಡೀ ಭಾರತಕ್ಕೆ ಅನ್ವಯವಾಗುವ ಏಕರೀತಿಯ ದಂಡಶಾಸನವಿರಲಿಲ್ಲ. ಮುಸ್ಲಿಮರಿಗೆ ಸಂಬಂಧಿಸಿದಂತೆ ಕುರಾನಿನ ಆಧಾರದ ಮೇಲೆ ರಚಿತವಾಗಿದ್ದ ಅಪರಾಧ ಕಾನೂನುಗಳು ಮೊಗಲರ ಆಡಳಿತ ಕಾಲದಿಂದ ಜಾರಿಯಲ್ಲಿದ್ದುವು. ಪ್ರೆಸಿಡೆನ್ಸಿ ರಾಜ್ಯಗಳಾದ ಬೊಂಬಾಯಿ, ಮದ್ರಾಸ್ ಮತ್ತು ಕಲ್ಕತ್ತಗಳಲ್ಲಿ ಇಂಗ್ಲೆಂಡಿನ ಅಪರಾಧ ಕಾಯಿದೆಗಳು ಜಾರಿಯಲ್ಲಿದ್ದವು. ಗ್ರಾಮಾಂತರ ಪ್ರದೇಶದ ನ್ಯಾಯಾಲಯಗಳಲ್ಲಿ ಅಪರಾಧದ ಕಾಯಿದೆ ಮತ್ತು ಬಳಕೆ ಅಷ್ಟೇನೂ ಸಮರ್ಪಕವಾಗಿರಲಿಲ್ಲ. ಬೊಂಬಾಯಿ ಪ್ರಾಂತ್ಯದಲ್ಲಿ ನ್ಯಾಯ ನಿರ್ವಹಣೆಯ ಕಾರ್ಯದಲ್ಲಿ ಸೂಕ್ತವಾದ ಹಲವು ಮಾರ್ಪಾಡುಗಳಾಗಿದ್ದುವು. ಒಟ್ಟಿನಲ್ಲಿ ಈ ಕಾಯಿದೆಗಳ ಬಳಕೆಯಲ್ಲಿ ಅನೇಕ ನ್ಯೂನತೆಗಳೂ ತಾರತಮ್ಯಗಳೂ ಇದ್ದುವು. ಇವುಗಳನ್ನು ನಿವಾರಿಸಿ ಇಡೀ ದೇಶಕ್ಕೆ ಅನ್ವಯಿಸುವ ಏಕೈಕ ಕಾಯಿದೆಯನ್ನು ರೂಪಿಸುವ ಉದ್ದೇಶದಿಂದ ಇಂಡಿಯನ್ ಪೀನಲ್ ಕೋಡನ್ನು ಸಿದ್ಧಪಡಿಸಿ ಜಾರಿಗೆ ತರಲಾಯಿತು.		

	ಈ ಕಾಯಿದೆಯಲ್ಲಿ 23 ಅಧ್ಯಾಯಗಳಿದ್ದು, 511 ಕಾಲಂಗಳಿವೆ. ಅಪರಾಧಗಳನ್ನು ನಿರ್ದಿಷ್ಟವಾಗಿ ನಿರ್ಣಯಿಸುವ ಕಲಂಗಳು ಇದರಲ್ಲಿವೆ. ಶಿಕ್ಷೆಯನ್ನು ಹಾಗೂ ಶಿಕ್ಷೆಯ ಪರಿಮಿತಿಯನ್ನು ನಿರ್ಣಯಿಸುವ ಕಲಂಗಳೂ ಇವೆ. ಕಾಯಿದೆಯ ಕ್ಷೇತ್ರಾಧಿಕಾರ ಸುವಿಸ್ತಾರವಾಗಿದೆ. ಭಾರತ ದೇಶದಲ್ಲಿ ವಾಸಿಸುವವರೆಲ್ಲರಿಗೂ ಪ್ರವಾಸಿಗಳಿಗೂ (ಅನ್ಯದೇಶದ) ಇದು ಅನ್ವಯಿಸುತ್ತದೆ. ರಾಷ್ಟ್ರಾಧ್ಯಕ್ಷರು, ಗವರ್ನರುಗಳು, ಅನ್ಯ ದೇಶದ ರಾಷ್ಟ್ರಾಧ್ಯಕ್ಷರು, ರಾಜಮಹಾರಾಜರು ಮತ್ತು ರಾಯಭಾರಿಗಳು ಈ ಕಾಯಿದೆಗೆ ಅತೀತರಾಗಿರುತ್ತಾರೆ. ಅಪರಾಧಿಗಳನ್ನು ಶಿಕ್ಷಿಸಲು ಅನುಸರಿಸಬೇಕಾದ ನಡವಳಿಕೆಯೇನೆಂಬುದು 1898ರಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡಿನಲ್ಲಿ ನಿರ್ಣಯವಾಗಿದೆ. (ನೋಡಿ- ಕ್ರಿಮಿನಲ್-ಪ್ರೊಸೀಜರ್-ಕೋಡ್)

	ಕಾಯಿದೆಯ ಕ್ಷೇತ್ರಾಧಿಕಾರವನ್ನು ನಿರ್ಣಯಿಸುವ ಕಲಂಗಳು ಈ ಸಂಹಿತೆಯ ಮೊದಲನೆಯ ಅಧ್ಯಾಯದಲ್ಲಿವೆ. (ಕಲಂ 1 ರಿಂದ 5), ಕಾಯಿದೆಯಲ್ಲಿ ಬಳಸಿರುವ ಪದಗಳ ವ್ಯಾಖ್ಯೆಗಳು ಎರಡನೆಯ ಅಧ್ಯಾಯದಲ್ಲಿ 6 ರಿಂದ 52ಎ ವರೆಗಿನ ಕಲಂಗಳಲ್ಲಿವೆ. ಶಿಕ್ಷೆ. ಅದರ ವಿವಿಧ ರೂಪಗಳು ಮತ್ತು ಕಾಯಿದೆಯ ವಿನಾಯಿತಿ ಸಂದರ್ಭಗಳು ಮುಂದಿನೆರಡು ಅಧ್ಯಾಯಗಳಲ್ಲಿವೆ (ಕಲಂ 53ರಿಂದ 106), 5, 6 ಮತ್ತು 7ನೆಯ ಅಧ್ಯಾಯಗಳಲ್ಲಿ ದುಷ್ಟಾನುಕೂಲ (ಅಬೆಟ್‍ಮೆಂಟ್, 107), ತಕ್ಸೀರಿನ ಒಳಸಂಚು (ಕ್ರಿಮಿನಲ್ ಕಾನ್‍ಸ್ಪಿರೆಸಿ, 120ಎ), ದೇಶದ್ರೋಹಾತ್ಮಕ ಪಿತೂರಿ (121 ರಿಂದ 130) ಮತ್ತು ಭಾರತಸೈನ್ಯಕ್ಕೆ ಸಂಬಂಧಿಸಿದ ಅಪರಾದಗಳನ್ನು (131 ರಿಂದ 140) ನಿರ್ಣಯಿಸಲಾಗಿದೆ. ನ್ಯಾಯಬಾಹಿರಸಭೆ (ಅನ್‍ಲಾ ಫುಲ್ ಅಸೆಂಬ್ಲಿ, 141), ಬೀದಿ ಜಗಳ (ಅಫ್ರೇ, 159), ಸರ್ಕಾರಿ ಕಾರ್ಯನಿರತರಾದವರ ಕರ್ತವ್ಯನಿರ್ವಹಣೆಯಲ್ಲಿ ಅಡ್ಡಿ ಆತಂಕ ನಿರ್ಮಾಣ (172 ರಿಂದ 190), ಚುನಾವಣೆಯ ಅಪರಾಧಗಳು (171ಎ ಯಿಂದ 171ಜಿ)-ಇವು ಈ ಸಂಹಿತೆಯ 8ರಿಂದ 10ರ ವರೆಗಿನ ಅಧ್ಯಾಯಗಳಲ್ಲಿ ನಿರ್ಣಯವಾಗಿವೆ. ಸುಳ್ಳು ಸಾಕ್ಷ್ಯ (ಫಾಲ್ಸ್ ಎವಿಡೆನ್ಸ್, 191), ಸುಳ್ಳು ಸಾಕ್ಷ್ಯ ಸೃಷ್ಟನೆ (ಫ್ಯಾಬ್ರಿಕೇಟಿಂಗ್ ಫಾಲ್ಸ್ ಎವಿಡೆನ್ಸ್, 192) ಖೋಟಾ ನಾಣ್ಯ ತಯಾರಿಕೆ (231), ಅಳತೆ ತೂಕಗಳ ಅಪರಾಧಗಳು (264 ರಿಂದ 267), ಸಾರ್ವಜನಿಕ ಪೀಡೆ (ಪಬ್ಲಿಕ್ ನ್ಯೂಸೆನ್ಸ್, 268), ಸಾರ್ವಜನಿಕರ ಆರೋಗ್ಯ, ರಕ್ಷಣೆ, ಸೌಕರ್ಯ ನೀತಿನಿಯಮಗಳು ಹಾಗೂ ಮತಕ್ಕೆ ಸಂಬಂಧಪಟ್ಟ ಅಪರಾಧಗಳು-ಇವನ್ನು 11 ರಿಂದ 15ರವರೆಗಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ದಂಡಾರ್ಹ ನರಹತ್ಯೆ (ಕಲ್ಪಬಲ್ ಹಾಮಿಸೈಡ್ 299), ಕೊಲೆ (ಮರ್ಡರ್, 300). ಭಾದೆ (ಹರ್ಟ್, 319), ತೀವ್ರ ಬಾಧೆ (ಗ್ರೀವಸ್ ಹರ್ಟ್, 320). ಅಕ್ರಮವಾದ ತಡೆ (ಕ್ರಿಮಿನಲ್ ರಿಸ್ ಟ್ರೈನ್ಟ್, 339) ಮತ್ತು ಅವರೋಧ (ಕ್ರಿಮಿನಲ್ ಕನ್‍ಫೈನ್‍ಮೆಂಟ್, 340), ದುರಾಕ್ರಮಣ (ಅಸಾಲ್ಟ್, 351), ಬಾಲಾಪಹರಣ (ಕಿಡ್‍ನ್ಯಾಪಿಂಗ್, 359), ಮಾನವಾಪಹರಣ (ಅಬ್ಡಕ್ಷನ್, 362), ಬಲಾತ್ಕಾರ ಸಂಭೋಗ (ರೇಪ್, 375) ಮುಂತಾದವುಗಳ ವಿವೇಚನೆ 16ನೆಯ ಅಧ್ಯಾಯದಲ್ಲಿದೆ.

	ಹದಿನೇಳನೆಯ ಅಧ್ಯಾಯದಲ್ಲಿ ಕಳ್ಳತನ (ತೆಫ್ಟ್ 378), ಸುಲಿಗೆ (ಎಕ್ಸ್ಟಾರ್ಷನ್, 383), ದರೋಡೆ (ರಾಬರಿ, 390), ಡಕಾಯಿತಿ (391), ದುರುಪಯೋಗ (ಮಿಸ್ ಅಪ್ರೋಪ್ರಿಯೇಶನ್, 403), ದಂಡಾರ್ಹವಾದ ನ್ಯಾಸಭಂಗ (ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್, 405), ಕಳ್ಳಮಾಲು ಸ್ವೀಕರಣೆ, ಕಳ್ಳನಿಗೆ ಶಾಮೀಲು (411), ಮೋಸ (ಚೀಟಿಂಗ್, 418-420), ಕೇಡು (ಮಿಶ್ಚೀಫ್, 425) ದಂಡಾರ್ಹ ಅತಿಕ್ರಮಣ (ಕ್ರಿಮಿನಲ್ ಟ್ರೆಸ್‍ಪಾಸ್, 441), ಹಗಲುಗಳವು (ಹೌಸ್ ಬ್ರೇಕಿಂಗ್, 445) - ಇವನ್ನು ವಿವರಿಸಲಾಗಿದೆ.

	ಪೋರ್ಜರಿ (ಕಳ್ಳರುಜು, ಸುಳ್ಳುಪತ್ರ ಸೃಷ್ಟನೆ, 463), ಖೋಟಾ ನೋಟು ತಯಾರಿಕೆ (489ಎ), ದ್ವಿಪತ್ನೀತ್ವ (ಬಿಗಮಿ, 494) ಮತ್ತು ಮಾನನಷ್ಟ (ಡಿಫಮೇಷನ್, 499) - ಇವು ಮುಂದಿನ ಅಧ್ಯಾಯಗಳಲ್ಲಿವೆ.

	ಅಂತಿಮ ಅಧ್ಯಾಯದಲ್ಲಿನ 511ನೆಯ ಕಲಮಿನಲ್ಲಿ ಅಪರಾಧ ಪ್ರಯತ್ನವೂ ದಂಡಾರ್ಹವೆಂದು ತಿಳಿಸಲಾಗಿದೆ. ಜೇಬುಕಳ್ಳನೊಬ್ಬ ಜೇಬು ಕತ್ತರಿಸಿದಾಗ ಅವನಿಗೆ ಏನೂ ಸಿಕ್ಕದಿದ್ದರೂ ಅವನ ಕೃತ್ಯ ಅಪರಾಧವಾಗುತ್ತದೆ. ಆದರೆ ಕಲಂ 511ರ ಪ್ರಕಾರ, ಪೀನಲ್ ಕೋಡಿನಲ್ಲಿ ನಿರ್ಣಯಿಸಲಾಗಿರುವ ಶಿಕ್ಷೆಯಲ್ಲಿ ಅರ್ಧಭಾಗವನ್ನು ಮಾತ್ರ ಅವನ ಮೇಲೆ ವಿಧಿಸಬಹುದು.		 										
 (ಎಂ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ